ಚಿಕ್ಕೋಡಿ: ಗಣೇಶ ಮೂರ್ತಿ ಆರ್ಡರ್ ಮಾಡಿ ಮುಧೋಳಕ್ಕೆ ಹೋಗುತ್ತಿದ್ದ ಕಾರಿನಲ್ಲಿ ಅಪಘಾತ ಸಂಭವಿಸಿದ ಘಟನೆ ಕೊಲ್ಲಾಪುರದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಕಾರು ಮತ್ತು ಸರಕು ಸಾಗಣೆ ವಾಹನದ ನಡುವೆ ಡಿಕ್ಕಿಯಾಗಿ 2 ಯುವಕರು ಸಾವನ್ನಪ್ಪಿದ್ದು, 4 ಮಂದಿ ಗಾಯಗೊಂಡಿದ್ದಾರೆ. ಚಿಕ್ಕೋಡಿ ತಾಲೂಕಿನ ಬೆಳ್ಕೂಡ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಮುಧೋಳದ ಸೌರಭ ಸಂಜು ಕುಲಕರ್ಣಿ (ವಯಸ್ಸು 22) ಮತ್ತು ರಾಕೇಶ ಸುರೇಂದ್ರ ವಾಡ್ಕರ್ (23 ವರ್ಷ) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯುವಕರ ಹೆಸರು.

ಈ ಬಗ್ಗೆ ಹೆಚ್ಚಿನ ಮಾಹಿತಿ ಏನೆಂದರೆ ಮುಧೋಳದ ನಾಲ್ವರು ಯುವಕರು ಗಣೇಶ ಮೂರ್ತಿ ಆರ್ಡರ್ ಮಾಡಲು ಕಾರಿನಲ್ಲಿ ಕೊಲ್ಲಾಪುರಕ್ಕೆ ತೆರಳಿದ್ದರು. ಕೊಲ್ಹಾರದಲ್ಲಿ ಗಣೇಶ ಮೂರ್ತಿ ಆರ್ಡರ್ ಮಾಡಿ ಮುಧೋಳಕ್ಕೆ ವಾಪಸಾಗುತ್ತಿದ್ದಾಗ ಚಿಕ್ಕೋಡಿ ತಾಲೂಕಿನ ಬೆಳ್ಕೂಡ ಕ್ರಾಸ್ ಬಳಿ ನಿಪಾಣಿ ಮಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಇವರ ವಾಹನಕ್ಕೆ ಎದುರಿನಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಇಬ್ಬರು ಯುವಕರು ಸಾವು: ಮುಧೋಳಕ್ಕೆ ಹೋಗುತ್ತಿದ್ದ ಕಾರಿನಲ್ಲಿದ್ದ ಆನಂದ ಘಾಟಗೆ, ವಿಕಾಸ ಬೆಳಗಿ ಹಾಗೂ ವಾಹನದಲ್ಲಿದ್ದ ಚಿಕ್ಕೋಡಿಯ ಸುಭಾಷ ಬಜಂತ್ರಿ ಹಾಗೂ ಅವರ ಪತ್ನಿ ರೇಣುಕಾ ಬಜಂತ್ರಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.